Monday, October 27, 2008

ನಿತ್ಯ ಅಮವಾಸ್ಯೆ, ನಿತ್ಯ ದೀಪಾವಳಿ

ಹೊರಗೆ ಹೊಸ್ತಿಲ ಬಳಿ ಇಟ್ಟ ದೀಪಗಳು
ಗಾಳಿಗೆ ಅಲುಗುತ್ತಿವೆ, ನಲುಗುತ್ತಿವೆ

ಒಳಮನೆಯಲಿ ಹಚ್ಚಿಟ್ಟ ದೀಪ ಸುಮ್ಮನಿದೆ
ಅಲುಗದೇ, ನಲುಗದೇ ಬೆಳಗುತ್ತಿದೆ

ನಾನು ಸುಮ್ಮನೇ ನೋಡುತ್ತಿದ್ದೇನೆ

*****

ಆಗಸವ ಮಿನುಗುವ ಪಟಾಕಿಗಳು
ನೆಲವ ಬೆಳಗಿದ ಭೂಚಕ್ರಗಳು, ಹೂಕುಂಡಗಳು
ಗಳಿಗೆಗೊಮ್ಮೆ ಬೆಳಗಿ ಇಲ್ಲವಾಗುತ್ತಿವೆ

ದೀಪ ಅದನ್ನೇ ನೋಡುತ್ತ ಸುಮ್ಮನಿದೆ

*****

ರಾತ್ರಿ ಇವತ್ತು ನಿದ್ರಿಸುವುದಿಲ್ಲ
ಸದ್ದು ಸುಮ್ಮನಾಗುವುದಿಲ್ಲ
ಕವಿದ ಕತ್ತಲೆ ಚದುರಿಸುತ್ತವೆ ಬೆಳಕು, ಶಬ್ದ

ಕೊಂಬೆಯಡಿ ಮುದುರಿದ ಹಕ್ಕಿ ಬೆಚ್ಚಿದಂತಿದೆ

*****

ನಡುರಾತ್ರಿ ಸಮೀಪಿಸಿದಂತೆ
ಕತ್ತಲು ದಟ್ಟವಾಗುತ್ತಿದೆ, ಪಟಾಕಿಗಳು ಮಂಕಾಗುತ್ತಿವೆ
ಹಣತೆಗಳು ಮಾತ್ರ ಮೌನವಾಗಿ ಬೆಳಗಿವೆ

ಆ ಕವಿದ ಕತ್ತಲೆಯನ್ನೇ ದಿಟ್ಟಿಸಿ ನೋಡುತ್ತಿವೆ

*****

ಉರಿಯುತ್ತ ಹೋದಂತೆ, ಸಿಡಿಯುತ್ತ ಹೋದಂತೆ
ಎಲ್ಲವೂ ಇಲ್ಲವಾಗುವುದು, ಸುಮ್ಮನಾಗುವುದು
ಶಬ್ದ ಮೌನವಾಗಿ, ಬೆಳಕು ಕತ್ತಲಾಗುವುದು

ನಾನು ಸುಮ್ಮನೇ ನೋಡುತ್ತಿದ್ದೇನೆ

*****

ದೀಪದಾಚೆ ಕತ್ತಲು, ಸಿಡಿತದಾಚೆ ಮೌನ
ಉಕ್ಕುವ ಕಡಲಿನ ಕೆಳಗೆಲ್ಲೋ ಕದಲದ ನೆಲ
ಮನದ ಮಾಮರದಡಿ ಮೌನ ಕೋಗಿಲೆ

ನಾನು ಸುಮ್ಮನಿದ್ದೇನಾ? ಸುಮ್ಮನಾಗಬಲ್ಲೆನಾ?

*****

ಬೆಳಕು-ಕತ್ತಲೆಯ ನಡುವೆ, ಶಬ್ದ-ಮೌನದ ಮಧ್ಯೆ
ಎಚ್ಚರವಾಗಿದ್ದೇ ಕಳೆದುಹೋಗುತ್ತ, ನಿನ್ನೆಗಳಲ್ಲೇ ಇಂದು ಇಲ್ಲವಾಗುತ್ತ
ಎಲ್ಲೋ ಹೊರಟಿದೆ ನೆನಪುಗಳ ಮೆರವಣಿಗೆ

ಹೌದು, ಇಲ್ಲಿ ನನಗೆ ನಿತ್ಯ ಅಮವಾಸ್ಯೆ, ನಿತ್ಯ ದೀಪಾವಳಿ

- ಪಲ್ಲವಿ ಎಸ್‌.

(ದಯವಿಟ್ಟು ಈ ಕವಿತೆ ತಿದ್ದುವಿರಾ? ಅಂದುಕೊಂಡ ಹಾಗೆ ಬಂದಿಲ್ಲ)

14 comments:

ಸಂದೀಪ್ ಕಾಮತ್ ಹೇಳಿದರು...

ನನ್ಗೆ ಕವಿತೆ ಬಗ್ಗೆ ಗೊತ್ತಿದ್ರೆ ತಿದ್ದಬಹುದಿತ್ತು!! ನಂಗೆ ಕವಿತಾ ಲಂಕೇಶ್ ಮಾತ್ರ ಗೊತ್ತಿರೋದು:(

shreedevi kalasad ಹೇಳಿದರು...

ಮೇಡಮ್‌, ಏನು ಕವಿತೆ ತಿದ್ದೋದಾ? ಎಷ್ಟೆಲ್ಲ ಓದ್ಕೊಂಡಿದಿರಿ, ಪ್ರಮುಖರಾದವರನ್ನೆಲ್ಲ ಓದ್ಕೊಂಡು ಪ್ರಭಾವಿತರಾಗಿದ್ದೀರಿ. ಇಷ್ಟೆಲ್ಲಾ ಆದಮೇಲೂ ತಿದ್ದುವಿರಾ ಅಂತ ಹೇಳಿದ್ದು ಯಾಕೋ ಸರಿಬರಲಿಲ್ಲ. ಯಾಕೇ ಹೀಗೆ ಅನ್ನಿಸಿದ್ದು.

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಕೊನೆಯ ಚರಣ ಚೆನ್ನಾಗಿದೆ..ದ್ವಂದ ಮನಸಿನ ತೊಳಲಾಟ ತುಂಬ ಸಹಜವಾಗಿ ಚಿತ್ರಿಸಿದ್ದೀರಿ..ದೀಪದ ಮಹತ್ವ ಕತ್ತಲೆಯಲ್ಲಿ ಮಾತ್ರ ....ಧನ್ಯವಾದಗಳು...

ranjith ಹೇಳಿದರು...

ಪಲ್ಲವೀ,

ನೀವು ತಿದ್ದುವಿರಾ ಅಂತ ಕೇಳಿದ ಮೇಲೆ ಅನುಮಾನಿಸಿ ಮತ್ತಷ್ಟು ಸಲ ಓದಿಕೊಂಡೆ...

ತಿದ್ದಬೇಕಾದ್ದು ಏನಿಲ್ಲ ಅನಿಸಿತು...ಚಂದಗೆ ಬರೆದಿದ್ದೀರಿ..

ನನಗಂತೂ ಮುದ ಕೊಟ್ಟವು...

ಥ್ಯಾಂಕ್ಸ್..:-)

Gurus world ಹೇಳಿದರು...

ಪಲ್ಲವಿರವರೇ ,
ನಿಮ್ಮ ಕವಿತೆ , ನೀವು ಅಂದುಕೊಂಡ ಹಾಗೆ ಬರೆದಿರುವಿರಿ , ತಿದ್ದುವ ಅಗತ್ಯ ಏನು ಇಲ್ಲ ಅಂತ ಅಂದುಕೊಂಡಿದ್ದೇನೆ...
ಆದರೂ,, ಬೆಳಕಿಗಿಂತ ಕತ್ತಲೆಗೆ ತುಂಬಾ ಒತ್ತು ಕೊಟ್ಟ ಹಾಗೆ ಇದೆ.... (ಯಾವಾಗಲು ಖಿನ್ನತೆ ಬಗ್ಗೆ ಹೇಳುತಿರುತೀರಲ್ಲ ಅದಕ್ಕ?)

ರಾಘು ತೆಳಗಡಿ ಹೇಳಿದರು...

ಪಲ್ಲವಿ "ನಿತ್ಯ ಅಮವಾಸ್ಯೆ, ನಿತ್ಯ ದೀಪಾವಳಿ" ಚೆಂದ ಬರದಿ, ತಮಾಸೆ ಮಾಡಾಕು ಮಿತಿ ಇರ್ಬೇಕವ್ವ....ಏನು ಹಂಗ ಕೇಳಿ...ಮನಸ್ಸು ಅಂದುಕೊಂಡಂಗ ಬಂದಿಲ್ಲ ಅಂದ್ರ ಇನ್ನೊಂದು ಬರದ್ರಾಯಿತಪ್ಪಾ....ಯಾಕಂದ್ರ ನೀ ಅನ್ಕೊಂಡಂಗ ಬಂದಿಲ್ಲ ಅನ್ನುದು ನಿಂಗ್ ಮಾತ್ರ ಗೊತ್ತೈತಲ್ಲಾ....ಕವನದ ಕೊನೆ ಎರಡು ಪ್ಯಾರ ಮಸ್ತ ಅನ್ಸಿದು ನನಗ. ಇದೆಲ್ಲ "ಹೌದಲ್ಲ" ಅನ್ನಸ್ತು, ಆದ್ರ ನನಗ್ ನಿನ್ನಂಗ ಹೇಳಾಕ್ ಬರಂಗಿಲ್ಲಂತ ಬೇಸರ ಆಯಿತು :(. ನಮಗೆ ಬೆಳಕು ನೀಡಿ ಮೌನ ಮಾಯವಾಗುವ ದೀಪಗಳು ಅವಿದ್ದಾಗ ಅದೆಷ್ಟು ಚೆಂದ, ಕತ್ತಲಾದಾಗ ದೀಪವುರಿಸಿದ ಪಣತಿಯೂ ಕಾಣದಾಗುತ್ತ ಜೊತೆಗೆ ಬತ್ತಿಯೊ ತನ್ನ ಮೈ ತಾನೇ ಸುಟ್ಟಿಕೊಂಡು ಹೊಗುತ್ತೆ! ಬೆಳಗುತ್ತಿದ್ದಾಗ ನೋಡಿ ಸಂತಸಿದ ಜೀವ ಕತ್ತಲ ಸತ್ಯವನ್ನೂ ಒಪ್ಪಿ ಬರೆದ ನಿನ್ನ ಕವನದ ಸಾಲುಗಳು ಸುಂದರ! ನೀ ಅನ್ಕೊಂಡಾಂಗ ಒಂದು ದೌಡ್ ಬರ್ದು ಹಾಕು ಕವನಾನ.

ಪಲ್ಲವಿ ಎಸ್‌. ಹೇಳಿದರು...

ಥ್ಯಾಂಕ್ಸ್‌ ಸಂದೀಪ್‌,

ಬಲ್ಲವರಿಂದ ತಿದ್ದಿಸಿ.

- ಪಲ್ಲವಿ ಎಸ್‌.

ಪಲ್ಲವಿ ಎಸ್‌. ಹೇಳಿದರು...

ಶ್ರೀದೇವಿ,

ಓದುವುದು ಬೇರೆ, ಬರೆಯುವುದು ಬೇರೆ. ಅದೇನೋ ಹೇಳ್ತಾರಲ್ಲ: ನವಿಲನ್ನು ನೋಡಿ ಕೆಂಬೂತ ಗರಿ ಕೆದರಿಕೊಂಡಿತಂತೆ. ಹಾಗಿದೆ ನನ್ನ ಸ್ಥಿತಿ.

ನಿಮ್ಮಗಳ ಮುಂದೆ ನಾನೇನು ಮಹಾ. ದಯವಿಟ್ಟು ಕವಿತೆ ತಿದ್ದಿ.

- ಪಲ್ಲವಿ ಎಸ್‌.

ಪಲ್ಲವಿ ಎಸ್‌. ಹೇಳಿದರು...

ಥ್ಯಾಂಕ್ಸ್‌ ಪ್ರಕಾಶ್‌,

ನೀವಂತೂ ಸಾರಾಸಗಟಾಗಿ ಹೊಗಳಿ, ಕವಿತೆಯ ದೋಷಗಳನ್ನು ಸಿಮೆಂಟ್‌ ಮತ್ತು ಮರಳಿನ ನಡುವೆ ಮರೆಮಾಚಿಬಿಟ್ಟಿದ್ದೀರಿ! :)

- ಪಲ್ಲವಿ ಎಸ್‌.

ಪಲ್ಲವಿ ಎಸ್‌. ಹೇಳಿದರು...

ಪ್ರೀತಿಯ ರಂಜಿತ್‌,

ನೀವು ದೀಪಾವಳಿ ಮೂಡ್‌ನಲ್ಲಿದ್ದೀರಿ. ಈಗ ಎಲ್ಲದೂ ನಿಮಗೆ ಬೆಳಕಿನ ಚಿತ್ತಾರ, ಬಾಣಬಿರುಸಿನಂತೆ ಕಾಣುತ್ತಿದೆ. ಹಬ್ಬದ ಅಮಲು ಇಳಿದ ನಂತರ ಓದಿ ತಿದ್ದಿ.

ಅಂದ್ಹಾಗೆ, ಹಬ್ಬ ಜೋರಾಯ್ತಲ್ವಾ?

- ಪಲ್ಲವಿ ಎಸ್‌.

ಪಲ್ಲವಿ ಎಸ್‌. ಹೇಳಿದರು...

ಗುರು ಅವರೇ,

ನಿಮಗೂ ರಂಜಿತ್‌ಗೆ ಹಾಕಿದ ಪ್ರತಿಕ್ರಿಯೆಯೇ ಡಿಟ್ಟೋ. ಇನ್ನೊಮ್ಮೆ ಓದಿ, ಏನಾದರೂ ಸಲಹೆ ಕೊಡಿ.

- ಪಲ್ಲವಿ ಎಸ್‌.

ಪಲ್ಲವಿ ಎಸ್‌. ಹೇಳಿದರು...

ರಾಘು,

ನೀವು ಪಾಪ ದೂರದಲ್ಲಿದ್ದೀರಿ. ಹಣತೆಯೂ ಮಸ್ತ್‌ ಜ್ಯೋತಿಯ ಹಾಗೆ ಕಾಣ್ತಿದೆ ನಿಮಗೆ. ಅದಕ್ಕೆಂದೇ ಸಾಧಾರಣ ಕವನವನ್ನೂ ಮೆಚ್ಚಿಕೊಂಡು ಹೊಗಳಿದ್ದೀರಿ. ನಾನೇ ತಿದ್ದುತ್ತೇನೆ ಬಿಡಿ.

- ಪಲ್ಲವಿ ಎಸ್‌.

ಕುಮಾರ ರೈತ ಹೇಳಿದರು...

ದೀಪಾವಳಿ ನೆಪವಾಗಿಟ್ಟುಕೊಂಡು ಚಿಂತನೆಗೆ ಹಚ್ಚುವ ರೂಪಕಗಳಿರುವ ಕವಿತೆಯಿದು.ಈ ಕೆಲವು ಸಾಲುಗಳನ್ನು
ಮತ್ತೆ ಮತ್ತೆ ಓದಿದೆ...
ಆಗಸವ ಮಿನುಗವ ಪಟಾಕಿಗಳು
ನೆಲವ ಬೆಳಗಿದ ಭೂ ಚಕ್ರಗಳು;ಹೂ ಕುಂಡಗಳು
ಗಳಿಗೆಗೊಮ್ಮೆ ಬೆಳಗಿ ಇಲ್ಲವಾಗುತ್ತಿವೆ
ದೀಪ ಅದನ್ನೇ ನೋಡುತ್ತಾ ಸುಮ್ಮನಿದೆ

ಉಕ್ಕುವ ಕಡಲಿನ ಕೆಳಗೆಲೋ ಕದಲದ ನೆಲ
ಮನದ ಮಾಮರದಡಿ ಮೌನ ಕೋಗಿಲೆ

ಇಷ್ಟು ಚೆಂದದ ಕವಿತೆ ಓದಿಸಿದ್ದಕ್ಕೆ ಧನ್ಯವಾದ...
ಕುಮಾರ ರೈತ

ಸುಪ್ರೀತ್.ಕೆ.ಎಸ್. ಹೇಳಿದರು...

ಕವಿತೆ ಚೆನ್ನಾಗಿದೆ. ಆದರೆ ಏನೋ ಮಿಸ್ಸಾದ ಹಾಗೆ ಅನ್ನಿಸಿತು... ಇನ್ನೂ ಚೆನ್ನಾಗಿ ಶೇಪ್ ಅಪ್ ಮಾಡಬಹುದು ಅನ್ನಿಸ್ತು...

ಹ್ಯಾಪಿ ಅಮಾವಾಸ್ಯೆ, ಹ್ಯಾಪಿ ದೀಪಾವಳಿ :)